ಕವಿ : ಕುವೆಂಪು
ಗಾಯನ : ಸಿ.ಅಶ್ವಥ್
ಚಿತ್ರ: ಕಾಮನ ಬಿಲ್ಲು
ಸಂಗೀತ : ಎಂ.ರಂಗರಾವ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ

ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹ ಪರ ಸಾಧನವು

ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಸ್ಟಿ ನಿಯಮದೊಳಗವನೆ ಭೋಗಿ ||ಉಳುವಾ ಯೋಗಿಯ ನೋಡಲ್ಲಿ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ

ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||ಉಳುವಾ ಯೋಗಿಯ ನೋಡಲ್ಲಿ||

ಯಾರು ಅರಿಯದ ನೇಗಿಲ ಯೋಗಿಯು ಲೋಕಕೆ ಅನ್ನವನೀಯುವನು

ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ

ನೇಗಿಲ ಕುಳದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||ಉಳುವಾ ಯೋಗಿಯ ನೋಡಲ್ಲಿ||
Category:ಕುವೆಂಪು_ಗೀತೆಗಳು